Friday, May 24, 2013

ಫಿಕ್ಸಿಂಗ್‌ ಭೂತಕ್ಕೆ ಹೆದರಿ ಐ.ಪಿ.ಎಲ್‌. ರದ್ದು ಸರಿಯಲ್ಲ


ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿಯಾಗಿದ್ದರೂ ಭಾರತ ಉಪಖಂಡ ಸೇರಿದಂತೆ ಏಷ್ಯಾ ಖಂಡದಲ್ಲಿ ಜನಪ್ರಿಯವಾಗಿರುವ ಆಟ ಕ್ರಿಕೆಟ್‌. ಇದೇ ಕಾರಣದಿಂದ ಇಲ್ಲಿ ಕ್ರಿಕೆಟ್‌ ಆಟಗಾರರಿಗೆ ದೇವತಾ ಸ್ಥಾನ ಸಿಗುತ್ತದೆ, ಜಾಹಿರಾತು ಮಾಧ್ಯಮದಲ್ಲಿ ಸಿಂಹಪಾಲು ನಮ್ಮ ಕ್ರಿಕೆಟಿಗರಿಗೆ ಮೀಸಲು, ದೇಶದ ಪರ ಯಾವುದೇ ಮಾದರಿಯ ಪಂದ್ಯಗಳಲ್ಲಿ ಅಂತಾರಾಷ್ಟ್ರೀಯ ಕ್ಯಾಪ್‌ ಧರಿಸಿ ಮಿಂಚಬೇಕೆಂಬುದು ಪ್ರತೀ ಕ್ರಿಕೆಟಿಗನ ಕನಸು. ಆರು ವರ್ಷಗಳ ಹಿಂದೆ ಬಿಸಿಸಿಐ ತನ್ನ ಸ್ವಂತ ಬ್ಯಾನರ್‌ ಅಡಿಯಲ್ಲಿ ಇಂಡಿಯನ್‌ ಪ್ರಿಮಿಯರ್‌ ಲೀಗ್‌ (ಐಪಿಎಲ್‌) ಎಂಬ ರಂಗು ರಂಗಿನ ಕ್ರೀಡಾಕೂಟದ ಕನಸನ್ನು ಬಿಚ್ಚಿಟ್ಟಾಗ ಕ್ರಿಕೆಟ್‌ ವಿಶ್ವವೇ ಬೆರಗಾಗಿತ್ತು, ಇದಲ್ಲೆಕ್ಕಿಂತ ಮಿಗಿಲಾಗಿ ದೇಶದ ಕ್ರಿಕೆಟ್‌ ರಸಿಕರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು.

ಐಪಿಎಲ್‌ ಎಂಬ ಮಾಯಾ ಪೆಟ್ಟಿಗೆ ಆರಂಭದಿಂದಲೇ ಒಂದೊಂದು ವಾದಗಳಿಂದ ಸುದ್ದಿಯಾಗುತ್ತಿದ್ದರೂ ಬಿಸಿಸಿಐ ತನ್ನಲ್ಲಿರುವ ಹಣ ಬಲ ಮತ್ತು ಅಧಿಕಾರವನ್ನು ಬಳಸಿ ಪ್ರತೀ ಕೂಟವೂ ಯಶಸ್ವಿಯಾಗುವಂತೆ ಮಾಡುತ್ತಿತ್ತು. ಆದರೆ ಪ್ರಸ್ತುತ ಸಾಗುತ್ತಿರುವ 6ನೇ ಐಪಿಎಲ್‌ನಲ್ಲಿ ಎದ್ದಿರುವ ಬಿರುಗಾಳಿ ಈ ದೇಶಿಯ ಕ್ರೀಡಾಕೂಟದ ಮೆಲೊಂದು ಅನಿಶ್ಚಿತತೆಯ ಚಾದರವನ್ನೇ ಹಾಸಿ ಬಿಟ್ಟಿದೆ. ಇದರೊಂದಿಗೆ ಐಪಿಎಲ್‌ ಕ್ರೀಡಾಕೂಟವನ್ನೇ ನಿಷೇಧಿಸಬೇಕೆಂಬ ಕೂಗು ಎಲ್ಲೆಡೆ ಎದ್ದಿದೆ. ಕ್ರಿಕೆಟ್‌ ಚರಿತ್ರೆಯಲ್ಲಿಯೇ ಪ್ರಪ್ರಥಮ ಭಾರಿಗೆ ಮ್ಯಾಚ್‌ ಫಿಕ್ಸಿಂಗ್‌ ಬಹಿರಂಗಗೊಂಡಾಗಲೂ ವಿಶ್ವಾದ್ಯಾಂತ ಇದೇ ರೀತಿಯ ಕೂಗು ಎದ್ದಿತ್ತು. ಆದರೆ ಅದೆಲ್ಲವನ್ನೂ ನೆನಪಿನ ಮರೆಗೆ ಸರಿಸಿ ಕಾಲಕಾಲಕ್ಕೆ ಕ್ರಿಕೆಟ್‌ ಗೆಲ್ಲುತ್ತಾ ಬಂದಿದೆ ಎಂದಾದರೆ ಇದಕ್ಕೆ ಕಾರಣ ಕ್ರೀಡಾಸ್ಪೂರ್ತಿಯಿಂದ ತಮ್ಮ ತಮ್ಮ ದೇಶದ ಪರವಾಗಿ ಆಡುತ್ತಿರುವ ಹಲವು ಮಹಾನ್‌ ಆಟಗಾರರ ಕ್ರೀಡಾ ಸ್ಪೂರ್ತಿ ಭರಿತ ಶ್ರಮವಲ್ಲವೇ?

ಇನ್ನು ಐಪಿಎಲ್‌ ವಿಷಯಕ್ಕೆ ಬರುವುದಾದರೆ, ನಮ್ಮ ದೇಶದ ಎಳೆಯ ಕ್ರಿಕೆಟ್‌ ಪ್ರತಿಭೆಗಳಿಗೆ ತಮ್ಮ ಆಟದ ಜ್ಞಾನವನ್ನು ವಿಸ್ತರಿಸಿಕೊಳ್ಳಲಿರುವ ಮಹಾನ್‌ ವೇದಿಕೆ ಇದು. ಎಲ್ಲಾ ದೇಶಗಳ ಘಟಾನುಘಟಿ ಆಟಗಾರರು 9 ತಂಡಗಳಲ್ಲಿ ಹಂಚಿಹೋಗಿ ತಮ್ಮ ಜ್ಞಾನವನ್ನು ಎಳೆಯ ಕ್ರಿಕೆಟಿಗರಿಗೆ ಹಂಚುತ್ತಿರುವ ಕೂಟದು. ಇನ್ನು ಪ್ರತೀ ವರ್ಷ ಎರಡು ತಿಂಗಳುಗಳ ಕಾಲ ದೇಶೀಯ ಕ್ರೀಡಾ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಒಂದಿಲ್ಲೊಂದು ಪಂದ್ಯದಲ್ಲಿ ಅನಾವರಣಗೊಳಿಸುವ ಸುವರ್ಣಾವಕಾಶ ಇಲ್ಲಿರುತ್ತದೆ. ಐಪಿಎಲ್‌ನಿಂದಲೇ ರಹಾನೆ, ಅಂಬಟಿ ರಾಯಡು, ಅಶ್ವಿ‌ನ್‌, ನಮನ್‌ ಓಝಾ ಸೇರಿಂದಂತೆ ಇನ್ನೂ ಅನೇಕರು ವಿಶ್ವ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ?

ಒಂದು ದೃಷ್ಟಿಯಿಂದ ನೋಡಿದರೆ ಬಿಸಿಸಿಐ ಮತ್ತು ಫ್ರಾಂಚೈಸಿಗಳಿಗೆ ಐಪಿಎಲ್‌ "ಇಂಡಿಯನ್‌ ಪೈಸಾ ಲೀಗ್‌' ಆಗಿದ್ದರೆ, ಯುವ ಕ್ರೀಡಾಪಟುಗಳಿಗೆ ಇದು "ಇಂಡಿಯನ್‌ ಪ್ರತಿಭಾ ಲೀಗ್‌' ಕೂಡಾ ಆಗಿದೆ ಎಂಬುದನ್ನು ನಾವು ಮರೆಯಬಾರದು. ಸುಮಾರು 200 ಆಟಗಾರರ ಪ್ರತಿಭಾ ಪ್ರದರ್ಶನಕ್ಕೆ ಮಹಾನ್‌ ವೇದಿಕೆಯಾಗಿರುವ ಈ ಐಪಿಎಲ್‌ ಎಂಬ ಕೂಟದಲ್ಲಿ ದುರಾಸೆಗೆ ಬಲಿ ಬಿದ್ದ ಶ್ರೀಶಾಂತ್‌, ಚಾಂಡಿಲ, ಅಂಕಿತ್‌ರಂತಹ ಕೆಲವೇ ಕೆಲವು ಆಟಗಾರರಿಂದಾಗಿ (?) ಐಪಿಎಲ್‌ ಟೂರ್ನಿ ರದ್ದುಪಡಿಸುವುದು ಎಷ್ಟು ಸರಿ?

ಈ ಎಲ್ಲಾ ಸಾಧಕ ಬಾಧಕಗಳ ಕುರಿತಾಗಿ ಸರಕಾರ, ಕ್ರೀಡಾ ಮಂಡಳಿ ಹಾಗೂ ಕ್ರೀಡಾ ಪ್ರೇಮಿಗಳು ಮುಕ್ತ ಮನಸ್ಸಿನಿಂದ ಯೋಚಿಸಬೇಕಾದ ಸಮಯವಿದು... 

Friday, March 9, 2012

ಮಿಸ್‌ ಯು ವಾಲ್‌



ಕಲಾತ್ಮಕ ಆಟಗಾರನ ಎರಡನೇ ಇನ್ನಿಂಗ್ಸ್‌ ಅಂತ್ಯ

ಕಲಾತ್ಮಕ ಆಟಗಾರ, ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌, ಅರೆ ಕಾಲಿಕ ವಿಕೆಟ್‌ ಕೀಪರ್‌, ಟೀಮ್‌ ಇಂಡಿಯಾದ ಮಾಜಿ ಕಪ್ತಾನ ಎಲ್ಲಕ್ಕಿಂತ ಮಿಗಿಲಾಗಿ "ವಾಲ್‌' ಖ್ಯಾತಿಯ ರಾಹುಲ್‌ ಶರದ್‌ ದ್ರಾವಿಡ್‌ ಇಂದು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಕರ್ನಾಟಕ ರಾಜ್ಯ ಕ್ರಿಕೆಟ್‌ ಅಕಾಡೆಮಿ ಆವರಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತನ್ನ ನಿವೃತ್ತಿಯ ನಿರ್ಧಾರವನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಜ್ಯಾಮಿ ಪ್ರಕಟಿಸಿದ ಸಂದರ್ಭದಲ್ಲಿ ಬಿಸಿಸಿಐನ ಅಧ್ಯಕ್ಷ ಶ್ರೀನಿವಾಸನ್‌ ಹಾಗೂ ಕೆಎಸ್‌ಸಿಎ ಅಧ್ಯಕ್ಷರಾದ ಹಾಗೂ ದ್ರಾವಿಡ್‌ ಅವರ ಆಪ್ತ ಮಿತ್ರ ಅನಿಲ್‌ ಕುಂಬ್ಲೆ ಈ ವಿದಾಯದ ಕ್ಷಣಕ್ಕೆ ಅಧಿಕೃತ ಸಾಕ್ಷಿಯಾಗಿದ್ದರು.


ಎದುರಾಳಿ ಬೌಲರ್‌ಗಳನ್ನು ನಿರ್ಲಿಪ್ತ ಚಿತ್ತದಿಂದ ಎದುರುಸಿತ್ತಿದ್ದ ರೀತಿಯಲ್ಲಿಯೇ ದ್ರಾವಿಡ್‌ ತನ್ನ 16 ವರ್ಷಗಳ ಸುಧೀರ್ಘ‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುವ ನಿರ್ಧಾರವನ್ನು ತನ್ನ ಎಂದಿನ ನಗುಮುಖದ ನಿರ್ಲಿಪ್ತ ಭಾವದಿಂದಲೇ ಪ್ರಕಟಿಸಿದರು. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ 1996ರಲ್ಲಿ ಸ್ಮರಣೀಯವಾಗಿ ಆರಂಭಗೊಂಡ ಈ ಕಲಾತ್ಮಕ ಆಟಗಾರನ ಕ್ರಿಕೆಟ್‌ ಬಾಳ್ವೆ ಈ ರೀತಿಯಾಗಿ ಅನಿರೀಕ್ಷಿತ ಅಂತ್ಯವಾಯಿತು.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಅಂತ್ಯಗೊಂಡ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಗಮನಾರ್ಹ ಸಾಧನೆ ತೋರಲು ದ್ರಾವಿಡ್‌ ವಿಫ‌ಲರಾಗಿದ್ದರು. ಆದಾಗಲೆ ಭಾರತ ತಂಡದ ಹಿರಿಯ ಆಟಗಾರರು ನಿವೃತ್ತಿಯಾಗಿ ಕಿರಿಯರಿಗೆ ಅವಕಾಶ ಮಾಡಿಕೊಡಬೇಕೆಂಬ ಕೂಗು ಕ್ರಿಕೆಟ್‌ ವಲಯದಲ್ಲಿ ಕೇಳಿ ಬರುತ್ತಿತ್ತು. ಇದಕ್ಕೆ ಮೌನವಾಗಿಯೇ ಸ್ಪಂದಿಸಿದಂತೆ ಸೂಕ್ಷ್ಮ ಮನಸ್ಥಿತಿಯ ಆಟಗಾರ ರಾಹುಲ್‌ ತಮ್ಮ ಟೆಸ್ಟ್‌ ಕ್ರಿಕೆಟ್‌ ಜೀವನಕ್ಕೆ ನಿವೃತ್ತಿ ಹೇಳಿದರು.


ಕಳೆದ ವರ್ಷವಷ್ಟೆ ಅವರು ಏಕದಿನ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. 164 ಟೆಸ್ಟ್‌ ಪಂದ್ಯಗಳಿಂದ 13288ರನ್‌ಗಳನ್ನು ಹಾಗೂ 344 ಏಕದಿನ ಪಂದ್ಯಗಳಿಂದ 10889ರನ್‌ಗಳನ್ನು ಕಲೆಹಾಕಿರುವ ಈ ಕಲಾತ್ಮಕ ಆಟಗಾರನ ಬ್ಯಾಟಿಂಗ್‌ ನೋಡುವುದೆಂದರೆ ಕ್ರಿಕೆಟ್‌ ಪ್ರೇಮಿಗಳಿಗೆ ಒಂದು ಹಬ್ಬ, ದಿವ್ಯಾನಂದದ ಅನುಭೂತಿ ಉಂಟಾಗುತ್ತಿತ್ತು. ಭಾರತದ ಉಪಖಂಡದಲ್ಲಿ ಮಾತ್ರವಲ್ಲದೆ ವಿದೇಶಿ ನೆಲಗಳಲ್ಲಿ ಭಾರತ ತಂಡಕ್ಕೆ ಅಪದಾºಂದವನಾಗಿ ಕಾಣಿಸಿಕೊಳ್ಳುತ್ತಿದ್ದ ದ್ರಾವಿಡ್‌ ತನ್ನ ಕಲಾತ್ಮಕ ಹಾಗೂ ಸ್ಥಿತಪ್ರಜ್ಞೆಯ ಆಟದಿಂದ ಎದುರಾಳಿ ತಂಡವನ್ನು ಕಂಗೆಡಿಸುತ್ತಿದ್ದರು. ತನ್ನ ಕಲಾತ್ಮಕ ಶೈಲಿಯಿಂದ ಮತ್ತು ವಿವಾದ ರಹಿತ ವೃತ್ತಿ ಜೀವನದಿಂದಾಗಿ ರಾಹುಲ್‌ ಭಾರತದ ಕ್ರಿಕೆಟ್‌ ಅಭಿಮಾನಿ ವರ್ಗದಲ್ಲಿ ಮಾತ್ರವಲ್ಲದೆ ವಿಶ್ವ ಮಟ್ಟದಲ್ಲಿ ತನ್ನದೇ ಅಭಿಮಾನಿ ವರ್ಗವನ್ನು ಹೊಂದಿದ್ದರು. ಕ್ರಿಕೆಟ್‌ ವಿಶ್ವದಲ್ಲಿ ಮಿಂಚಲು ಬಯಸುತ್ತಿರುವ ಅನೇಕ ಯುವ ಕ್ರಿಕೆಟಿಗರು ರಾಹುಲ್‌ ದ್ರಾವಿಡ್‌ ಅವರನ್ನು ತಮ್ಮ ರೋಲ್‌ ಮಾಡೆಲ್‌ ಎಂದು ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಈ ಕ್ರಿಕೆಟಿಗನ ಖ್ಯಾತಿ ಹಬ್ಬಿತ್ತು.


ಇನ್ನು ಮುಂದೆ ದ್ರಾವಿಡ್‌ ಐಪಿಎಲ್‌ನಲ್ಲಿ ಮುಂದುವರೆಯುವ ಇಂಗಿತವನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು, ಮಾತ್ರವಲ್ಲದೆ ತನ್ನ ಕುಟುಂಬದೊಂದಿಗೆ ಮುಂದಿನ ದಿನಗಳನ್ನು ಕಳೆಯುವ ತಮ್ಮ ಮನದಾಸೆಯನ್ನೂ ಸಹ ಇದೇ ಸಂದರ್ಭದಲ್ಲಿ ದ್ರಾವಿಡ್‌ ಹೊರಗೆಡಹಿದರು.




ದ್ರಾವಿಡ್‌ ಕ್ರೀಸಿಗೆ ಬಂದು ನಿಂತರೆ ವಾಲ್‌
ಫೀಲ್ಡಿಂಗ್‌ನಲ್ಲೂ ಜ್ಯಾಮಿ ಕಮಾಲ್‌
ಯುವ ಕ್ರಿಕೆಟಗರಿಗೆ ನೀವೇ ರೋಲ್‌ ಮಾಡೆಲ್‌
ನಿಮ್ಮ ಆಟವನ್ನು ಮರೆಯುವುದೆಂತು ರಾಹುಲ್‌
ನಿಮ್ಮ ಆಟದ ನೆನಪು ಎಂದೆಂದೂ ಹಸಿರು ಎಲ್ಲರೆದೆಯಲ್ಲೂ...

Tuesday, July 5, 2011

ಯೋಚನೆ ನಿತ್ಯ ನೂತನ...





ಆ ಊರಿನ ಬಸ್‌ ಸ್ಟ್ಯಾಂಡ್‌ನ‌ ಮೆಟ್ಟಿಲ ಮೇಲೆ ಕುರುಡನೊಬ್ಬ ಕುಳಿತಿದ್ದ , ಆತನ ಕಾಲಬುಡದಲ್ಲಿ ಒಂದು ಟೊಪ್ಪಿಯಿತ್ತು ಮತ್ತು ಅದರ ಪಕ್ಕದಲ್ಲೆ “ನಾನು ಕುರುಡ; ಏನನ್ನೂ ಕಾಣಲಾರೆ ದಯವಿಟ್ಟು ಸಹಾಯ ಮಾಡಿ’ ಎಂದು ಬರೆದಿದ್ದ ಚಿಕ್ಕ ಬೋರ್ಡ್‌ ಇತ್ತು. ಬಹಳಷ್ಟು ಜನ ಆ ದಾರಿಯಾಗಿ ಹೋಗಿ ಬರುತ್ತಿದ್ದರೂ ಈ ಕುರುಡನ ಟೊಪ್ಪಿಯಲ್ಲಿ ನಾಣ್ಯಗಳಷ್ಟೆ ಬಿದ್ದಿದ್ದವು. ಕುರುಡನನ್ನೂ ಆತನ ಟೊಪ್ಪಿಯನ್ನೂ ಪಕ್ಕದಲ್ಲಿದ್ದ ಬೊರ್ಡ್‌ ಅನ್ನು ನೋಡಿಯೂ ಜನರು ಇಂಥಹ ಪ್ರದೇಶದಲ್ಲಿ ಇದೆಲ್ಲ ಸಾಮಾನ್ಯ, ಇದೆಲ್ಲ ಹೊಟ್ಟೆ ಪಾಡಿಗಾಗಿ ಮಾಡುವ ನಾಟಕ ಎಂದುಕೊಂಡು ಮುಂದೆ ಸಾಗುತ್ತಿದ್ದರು.


ಆ ಸಮಯದಲ್ಲಿ ಅದೇ ದಾರಿಯಾಗಿ ಒಂದು ಜಾಹಿರಾತು ಕಂಪೆನಿಯ ಉದ್ಯೋಗಿ ಬಂದ, ಕ್ರಿಯಾಶೀಲ ಯೋಚನೆಯ ವ್ಯಕ್ತಿಯಾದ ಆತ ಈ ಕುರುಡನನ್ನೂ ಆ ಬರಹವನ್ನೂ, ಬಳಿಯಲ್ಲಿ ಬಿದ್ದಿದ್ದ ಕೆಲವೇ ಕೆಲವು ನಾಣ್ಯಗಳನ್ನೂ ಕಂಡ, ಒಂದರೆಕ್ಷಣ ನಿಂತು ಯೋಚಿಸಿದ, ನಂತರ ಏನನ್ನೂ ನಿರ್ಧರಿಸಿ ಆ ಬೋರ್ಡನ್ನು ತಿರುಗಿಸಿ ಅದರಲ್ಲೇನೋ ಬರೆದು ಅದನ್ನು ಆ ಕುರುಡನ ಕಾಲ ಬುಡದಲ್ಲಿರಿಸಿ ಮುಂದೆ ಸಾಗಿದ.


ತನ್ನ ಹೊಸ ಪ್ರಯೋಗದ ಫಲಿತಾಂಶ ತಿಳಿಯಲು ಸಾಯಂಕಾಲ ಅದೇ ಜಾಗಕ್ಕೆ ಬಂದು ಅಲ್ಲಿದ್ದ ಕುರುಡನ ಟೊಪ್ಪಿಯನ್ನು ನೋಡುತ್ತಾನೆ, ಪರಮಾಶ್ಚರ್ಯ, ಮಧ್ಯಾಹ್ನ ತಾನು ನೋಡುವಾಗ ಅದರಲ್ಲಿದ್ದ ಕೆಲವೇ ಕೆಲವು ನಾಣ್ಯಗಳಿಗೆ ಬದಲಾಗಿ ಸಂಜೆಯೊಳಗಾಗಿ ಆ ಟೊಪ್ಪಿಯು ಅನೇಕ ನಾಣ್ಯ ಮತ್ತು ನೋಟುಗಳಿಂದ ತುಂಬಿ ಹೋಗಿತ್ತು. ತನ್ನ ಕ್ರಿಯಾಶೀಲ ಯೋಚನೆಯ ಪ್ರಯೋಗ ಸಫಲತೆಯಾದ ಖುಷಿಯೊಂದಿಗೆ ಮತ್ತು ಕುರುಡನ ಆ ದಿನದ ಬಾಳ ಬುತ್ತಿ ಭರ್ತಿಯಾದ ಧನ್ಯತೆಯೊಂದಿಗೆ ಆತ ಮುಂದೆ ಹೋದ.


ಅಂದ ಹಾಗೆ ಆ ಬೋರ್ಡ್‌ನಲ್ಲಿ ಆ ವ್ಯಕ್ತಿ ಬರೆದ ಮಾಂತ್ರಿಕ ವಾಕ್ಯಗಳೇನು ಗೊತ್ತೆ...?


“ ಇದು ವಸಂತ ಋತುವಿನ ಸುಂದರ ಸಮಯ. ಆದರೆ... ನನ್ನ ಕಣ್ಣುಗಳಿಗೆ ಅದನ್ನು ಕಾಣುವ ಭಾಗ್ಯವಿಲ್ಲ...!!”


ಗೆಳೆಯರೇ, ನಮ್ಮ ಆಲೋಚನೆಗಳು ಕಾಲ, ಸ್ಥಳ, ಪರಿಸರಕ್ಕೆ ತಕ್ಕಂತೆ ನಮ್ಮ ಬದಲಾಗುತ್ತಿರಬೇಕು. ಯಾಕೆಂದರೆ...


“ಅದೇ ಬಾನು ಅದೇ ಭೂಮಿ ಈ ನಯನ ನೂತನ...”

ಇಲ್ಲಿದೆ ಮದುವೆಯ ಕುರಿತಾಗಿನ ಒಂದು ಸಣ್ಣ ತಿರ್ಗಾ - ಮುರ್ಗಾ ಜೋಕ್‌




ಮಳೆಯ ಮೊದಲ ಹನಿ ನೆಲವನ್ನು ಸ್ಪರ್ಶಿಸಿ ಅಂಕುರದ ಉದಯಕ್ಕೆ ನಾಂದಿ ಹಾಡಿದ ಸಮಯ ಮುಗಿದು ಹೋಗಿದೆ. ಈಗೇನಿದ್ದರೂ ಜಡಿಮಳೆ ಸುರಿದು ನೆಲದ ಒಡಲೆಲ್ಲಾ ಬಗೆದು ಅಂತರ್ಜಲ ರೂಪುಗೊಳುÉವ ಸಮಯ. ನವ ದಂಪತಿಗಳಿಗೆ ಬೆಚ್ಚನೆ ಸ್ಪರ್ಶದಲ್ಲಿ ಮೈಮುಚ್ಚಟೆಯಾಗಿ ಸಮಯ ಕ್ಷಣವಾಗಿ ಕಳೆಯು ಸುಸಂದರ್ಭ. ಇಲ್ಲಿದೆ ಮದುವೆಯ ಕುರಿತಾಗಿನ ಒಂದು ಸಣ್ಣ ತಿರ್ಗಾ - ಮುರ್ಗಾ ಜೋಕ್‌. ಹಾಗೇ ಸುಮ್ಮನೆ ಓದಿಕೊಂಡು ಬಿಡಿ...


ಮದುವೆಗೆ ಮುಂಚೆ


ಅವನು : ಅಬ್ಟಾ. ಕೊನೆಗೂ ಅದೊಂದು ಆದ್ರೆ ಒಳ್ಳೇದು. ಅದಕ್ಕಾಗಿ ಕಾಯುವುದು ಬಹಳ ಕಷ್ಟ


ಆವಳು : ನಿಗ್ಗೆ ನನ್ನನ್ನು ಬಿಡ್ಲಿಕ್ಕೆ ಇಷ್ಟ ಇದೆಯಾ?


ಅವನು : ಛೆ ಇಲ್ಲಪ್ಪ, ನಗ್ಗೆ ಅ ಬಗ್ಗೆ ಆಲೋಚಿಸ್ಲಿಕ್ಕೂ ಸಾಧ್ಯವಿಲ್ಲ


ಅವಳು : ನೀನು ನನ್ನನ್ನು ಪ್ರೀತಿಸ್ತಿಯಾ?


ಅವನು : ಖಂಡಿತವಾಗಿಯೂ!!


ಅವಳು : ನೀನು ಯಾವತ್ತಾದ್ರೂ ನಗ್ಗೆ ಮೋಸ ಮಾಡಿದ್ದೀಯ?


ಅವನು : ಇಲ್ಲ! ಯಾಕೆ ಇದನ್ನೆಲ್ಲ ಕೇಳ್ತಿದ್ದಿ?


ಅವಳು : ನನೊYಂದು ಮುತ್ತು ಕೊಡ್ತಿಯಾ?


ಅವನು : ಹೌದು


ಅವಳು : ನೀನು ನನ್ನನ್ನು ಹೊಡಿತೀಯಾ?


ಅವನು : ಇಲ್ಲಪ್ಪ! ನಾನು ಆ ಜಾತಿಯ ಮನುಷ್ಯ ಅಲ್ಲ


ಅವಳು : ನಾನು ನಿನ್ನನ್ನು ನಂಬ ಬಹುದಾ?


ಅವನು : ಹಾಂ! ಹೇಳು


ಇನ್ನು... ಮದುವೆಯಾದ ಸ್ವಲ್ಪ ಸಮಯದ ಬಳಿಕ - ಈ ಸಂಭಾಷಣೆಯನ್ನೆ ಕೊನೆಯಿಂದ ಓದಿಕೊಂಡು ಹೋಗಿ.